ವ್ಯಾಪ್ತಿ ಮೀರಿದ ಮೀನುಗಾರಿಕೆ ಜಗಳ, ತಕರಾರು || V4NEWS

ಇತ್ತೀಚೆಗೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೋದ ಬೋಟನ್ನು ಮೀನು ಸಹಿತ ಭಟ್ಕಳದ ಮೀನುಗಾರರು ವಶಪಡಿಸಿಕೊಂಡ ಪ್ರಕರಣ ನಡೆದಿದೆ. ಅದು ಪೆÇೀಲೀಸು ಠಾಣೆ ಹತ್ತಿದೆ. ಕಳೆದ ತಿಂಗಳು ಗೋವಾ ಕರಾವಳಿಯಲ್ಲಿ ಎರಡು ಬಾರಿ ಕನ್ನಡ ಕಡಲ ಮೀನು ಬೋಟುಗಳನ್ನು ಅಲ್ಲಿನವರು ದರೋಡೆ ಮಾಡಿದರು ಎಂಬ ದೂರು ದಾಖಲಾಗಿತ್ತು.

ಕಡಲ್ಗಳ್ಳರು ಎನ್ನುವುದು ಸಮುದ್ರ ಇತಿಹಾಸದ ಒಂದು ಭಾಗ. ಪೈರೇಟ್ಸ್‍ಗಳ ನಾನಾ ಸಿನಿಮಾ, ಕಾದಂಬರಿ, ಪುಸ್ತಕಗಳೆಲ್ಲ ಬಂದಿವೆ. ಅರಬ್ಬೀ ಸಮುದ್ರದಲ್ಲಿ ಕಡಲ್ಗಳ್ಳರು ಇದ್ದ ಬಗೆಗೆ ಅರಬ್ ವ್ಯಾಪಾರಿಗಳು ಮೊದಲಾದವರ ದಾಖಲೆಗಳಿಂದ ತಿಳಿದುಬರುತ್ತದೆ. ತುಳು ಪಾಡ್ದನದಂತೆ ಬೊಬ್ಬರ್ಯನು ಕಡಲ್ಗಳ್ಳರ ದರೋಡೆಗೆ ಸಿಲುಕಿ ಸಾವು ಗಾಯ ಹೊಂದಿ, ಬಿರುವನೊಬ್ಬನಿಗೆ ಸಿಕ್ಕು ದೈವವಾದ. ಇದು ತುಳು ಧರ್ಮದ ಪೂಜಾರಿಯನ್ನು ಸೂಚಿಸುವ ಆಧಾರ. ಕದಂಬ ರಾಜಸತ್ತೆಗಿಂತ ಮೊದಲು ಕಡಲ ಕದಂಬರು ಇದ್ದ ಬಗೆಗೆ ಚೇರ ಅರಸರ ದಾಖಲೆಗಳಲ್ಲಿ ಕಂಡು ಬರುತ್ತದೆ. ಚೇರ ಮತ್ತು ಕಡಲ ಕದಂಬರ ಯುದ್ಧ ನೀರಿನ ಮೇಲೆ ದೋಣಿಗಳಲ್ಲೇ ನಡೆಯುವುದಾಗಿದೆ. ಕಡಲ ಕದಂಬರು ಕಡಲ ಲೂಟಿಕೋರರು ಎಂಬುದು ಚೇರರ ಅಭಿಮತ.

ಸದ್ಯ ಅರಬ್ಬೀ ಸಮುದ್ರದಿಂದ ಕೆಂಪು ಸಮುದ್ರಕ್ಕೆ ಹೊಗುವಲ್ಲಿ ಏಡನ್ ಕೊಲ್ಲಿ ಸುತ್ತ ಕಡಲ್ಗಳ್ಳರ ಹಾವಳಿ. ಇವರು ಬಹುತೇಕ ಸೊಮಾಲಿಯಾದವರು ಎನ್ನಲಾಗಿದೆ. ಇವರ ವಿರುದ್ಧ ಭಾರತವೂ ಸೇರಿದಂತೆ ಜಂಟಿ ಕಾರ್ಯಾಚರಣೆ ಪಡೆ ಕಾವಲಿಗೆ ನಿಂತಿದೆ. ಆದರೆ ಗೋವಾ ಕರಾವಳಿಯಲ್ಲಿ ಮತ್ತು ಭಟ್ಕಳದಲ್ಲಿ ನಮ್ಮ ಮೀನುಗಾರರ ಮೀನು ಲೂಟಿಯು ಕಡಲ್ಗಳ್ಳರ ಕೆಲಸ ಅಲ್ಲ. ತಮ್ಮ ವ್ಯಾಪ್ತಿಯಲ್ಲಿ ಬಂದು ಮೀನು ಹಿಡಿದಿದ್ದಾರೆ ಎಂದು ಅಲ್ಲಿನ ಮೀನುಗಾರರು ಇಲ್ಲಿನ ಮೀನುಗಾರರು ಹಿಡಿದ ಮೀನನ್ನು ಕಸಿದುಕೊಂಡ ಪ್ರಕರಣಗಳು ಇವು.

ಆಳ ಕಡಲ ಮೀನುಗಾರಿಕೆ ಬೋಟುಗಳು ಎಂದರೂ ಅವು ಸಹ ಆಳಕ್ಕೆ ಹೋಗದೆ ಕರಾವಳಿಯಲ್ಲಿ ಬಡಗಣ ಇಲ್ಲವೇ ತೆಂಕಣಕ್ಕೆ ಹೋದುದರಿಂದ ಈ ತಿಕ್ಕಾಟ ಆಗಿದೆ. ಹಾಗಾದರೆ ಮೀನುಗಾರರು ಸಮುದ್ರದೊಳಕ್ಕೆ ಹೋಗದೆ ಕರಾವಳಿಯಲ್ಲೇ ಮೇಲೆ ಕೆಳಕ್ಕೆ ಏಕೆ ಹೋಗುತ್ತಾರೆ? ಸಮುದ್ರದ ಆಳಕ್ಕೆ ಹೋದರೆ ಅಲ್ಲಿ ಮೀನು ಸಿಗುವುದಿಲ್ಲ. ಮೀನುಗಳು ಕರಾವಳಿಗೆ ಹತ್ತಿರದಲ್ಲೇ ಬದುಕುವವುಗಳಾಗಿವೆ.

ನದಿ ತೊರೆಗಳಿಂದ ಮತ್ತು ಮಾನವ ವ್ಯವಹಾರಗಳಿಂದ ಕರಾವಳಿಯಲ್ಲಿ ಮೀನುಗಳಿಗೆ ಪೌಷ್ಟಿಕ ಆಹಾರ ದೊರೆಯುತ್ತದೆ. ಕಡಲ ನಡುವೆ ಅದಿಲ್ಲ. ಮೀನುಗಳಿಗೆ ನೇಸರ ಕಿರಣ ಬೇಕು. ಆಳ ಕಡಲನ್ನು ಸೂರ್ಯ ರಶ್ಮಿ ಮುಟ್ಟುವುದಿಲ್ಲ. ಕೆಲವು ಮೀನುಗಳು ಕಡಲ ನೆಲ ತಳದಲ್ಲೂ ಓಡಾಡುತ್ತವೆ. ಅವು ಆಳ ಕಡಲಲ್ಲಿ ತಳ ಕಾಣಲಾರವು. ಕಡಲ ಸಸ್ಯಗಳು ಕರಾವಳಿಗೆ ಸಮೀಪದಲ್ಲಿ ಮಾತ್ರ ಬೆಳೆಯುತ್ತವೆ. ಅವು ಮೀನುಗಳ ಆಹಾರ, ಅಡಗುದಾಣ, ಮೊಟ್ಟೆ ನೆಲೆ, ಮೀನು ಮರಿ ಕಿಂಡರ್‍ಗಾರ್ಟನ್ ಇತ್ಯಾದಿ ಆಗಿರುತ್ತವೆ. ಹವಳದ ಜೀವಿಗಳು ನೇರ ಸೂರ್ಯ ಕಿರಣ ಬೀಳುವ ಕಡಲಲ್ಲಿ ತಮ್ಮ ಕಾಲೊನಿ ಕಟ್ಟುತ್ತವೆ. ಹವಳದ ದಿಬ್ಬಗಳು ಮೀನುಗಳ ಮತ್ತು ಜೀವ ವೈವಿಧ್ಯದ ತಾಣಗಳಾಗಿವೆ. ಆಳ ಕಡಲಲ್ಲಿ ಬೆಳಕು ಇಲ್ಲವಾದ್ದರಿಂದ ಅಲ್ಲಿನ ಕೆಲವು ಮೀನುಗಳು ಕುರುಡು ಮೀನುಗಳು ಆಗಿರುತ್ತವೆ. ಅಲ್ಲದೆ ಆಳ ಹೋದಂತೆ ಕಡಲಿನ ಒತ್ತಡ ಎಷ್ಟು ಇರುತ್ತದೆ ಎಂದರೆ ನಾವು ಹೋದರೆ ಹಪ್ಪಳದಂತೆ ಲಟ್ಟಿಸಲ್ಪಡುತ್ತೇವೆ.

ಮೀನುಗಳಿಗೆ ಪೌಷ್ಟಿಕ ಆಹಾರ ನೀಡುವ ಕರಾವಳಿಯು ಅಡಗುದಾಣ, ಖಚಿತ ನೆಲೆಗಳನ್ನೂ ಒದಗಿಸುತ್ತದೆ. ಕರಾವಳಿಯು ಭೂತಟ್ಟೆಗಳ ಮುಂದುವರಿದ ಭಾಗವನ್ನು ಹೊಂದಿರುತ್ತವೆ. ಅವು ಕಾಲು ಕಿಲೋಮೀಟರ್‍ಗಿಂತ ಹೆಚ್ಚು ಆಳ ಇರುವುದಿಲ್ಲ. ಇವು ಕಡಲಿನ ಮೀನು ಸಸ್ಯ ಜೀವಿಗಳ ಪ್ರಮುಖ ಆವಾಸವಾಗಿದೆ. ತುಳುನಾಡಿನ ಕಡಲಿಗೆ ಮುಂಚಾಚಿದ ಭೂತಟ್ಟೆಗಳು ನಾಲ್ಕೂವರೆ ಕೋಟಿ ವರುಷ ಹಳೆಯ ತುಳು ನೆಲದ ಪ್ರಾಯದವೇ ಆಗಿವೆ. ಪರಶುರಾಮ ಸೃಷ್ಟಿಸಿದ್ದು ಇನ್ನೂ ವೈಜ್ಞಾನಿಕ ಸಂಶೋಧನೆಗೆ ಸಿಕ್ಕಿಲ್ಲ.

ಮುಂಚಾಚಿದ ಭೂತಟ್ಟೆಗಳು ಇಲ್ಲವೇ ಕಾಂಟಿನೆಂಟಲ್ ಶೆಲ್ಫ್ ವಿಸ್ತಾರವು ಜಗತ್ತಿನಲ್ಲಿ 2.43 ಕೋಟಿ ಚದರ ಕಿಲೋಮೀಟರ್ ಇದೆ. ಜಗತ್ತಿನ ಕರಾವಳಿಯ ಉದ್ದ 3,56,000 ಕಿಲೋಮೀಟರ್ ಮಾತ್ರ ಆಗಿರುವಾಗ ಮೀನುಗಳಿಗೆ ವಿಸ್ತಾರವಾದ ಭೂತಟ್ಟೆಯ ಹರವು ಎಷ್ಟು ಮುಖ್ಯವಾದುದು ಎಂದು ತಿಳಿಯಬಹುದು. ಕೆಲವು ಮೀನುಗಳು ಮಾತ್ರ ಉಪ್ಪು ನೀರು ಮತ್ತು ಸಿಹಿ ನೀರಿನಲ್ಲೂ ಬದುಕಬಲ್ಲುವು. ಕಂಡಿಗೆ ಇಲ್ಲವೇ ಕಾಣೆ ಮೀನಿನಂತವು ನದಿಯಲ್ಲಿ ಸಿಗಲು ಕಾರಣ ಇದು. ಸಾಲ್ಮನ್ ಮೀನುಗಳ ಕಡಲು ನದಿ ವಲಸೆ ಜಗದ್ವಿಖ್ಯಾತ. ಅಳಿವೆಗಳು ನದಿಗಳ ಮೂಲಕ ಕಡಲಿಗೆ ಆಹಾರ ಬರುವ ಬಾಯಿ ಆಗಿರುವುದರಿಂದ ಇದನ್ನೇ ಆಶ್ರಯಿಸಿಕೊಂಡಿರುವ ಮೀನುಗಳು ಬಹಳ ಇವೆ.

ಮಲ್ಪೆ ಮೀನುಗಾರಿಕಾ ಬಂದರು ಏಶಿಯಾದ ಅತಿ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರು ಆಗಿದೆ. ಆದರೆ ಬುಲ್ ಟ್ರೋಲಿಂಗ್ ಎಂಬ ಊರುದ್ದದ ಬಲೆ ಬಳಕೆ ಮತ್ತು ಪ್ರಖರ ಬೆಳಕು ಹಾಯಿಸಿ ಲೈಟ್ ಫಿಶಿಂಗ್ ನಡೆಯುತ್ತದೆ. ಇವೆರಡಕ್ಕೂ ನಿಷೇಧ ಇದೆ. ಆದರೂ ಆ ಬಗೆಯ ಮೀನುಗಾರಿಕೆ ನಡೆಸಿ ಮರಿ ನಾಶ ಮಾಡುತ್ತಾರೆ. ತತ್ಪರಿಣಾಮವಾಗಿ ಮೀನು ಕ್ಷಾಮ ಅನುಭವಿಸುತ್ತಾರೆ. ಜಗತ್ತಿನ 60 ಶೇಕಡಾ ಜನರು ಕರಾವಳಿಯಲ್ಲಿ ವಾಸಿಸುತ್ತಿದ್ದಾರೆ. ಕರಾವಳಿಯನ್ನು ನಾಶಮಾಡಿ, ಮೀನುಗಾರರನ್ನು ಮುಳುಗಿಸಿ ದೇಣಿಗೆ ವೀರರಾದವರು ಇದ್ದಾರೆ. ಕಡಲು ಉಳಿಯುವುದು ಮುಖ್ಯ ಕಡಲ ಜೀವಿಗಳು ಉಳಿಯುವುದೂ ಮುಖ್ಯ. ಇಲ್ಲದಿದ್ದರೆ ಜನರ ಬದುಕು ಬರಡು ಊಟದ ತಟ್ಟೆ ಬರಡು ಆಗುತ್ತದೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.