ಬುಡಾಪೆಸ್ಟ್: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‍ಶಿಪ್ – ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾಗೆ ಚಿನ್ನ

ವಿಶ್ವ ಆತ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಿನ್ನ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇದು ವಿಶ್ವ ಆತ್ಲೆಟಿಕ್ಸ್‍ನಲ್ಲಿ ಭಾರತ ಜಯಿಸಿರುವ ಪ್ರಪ್ರಥಮ ಚಿನ್ನವಾಗಿದೆ. ರವಿವಾರ ರಾತ್ರಿ ನಡೆದ ಫೈನಲ್‍ನಲ್ಲಿ ನೀರಜ್ ಚೋಪ್ರಾ 88.17 ಮೀ. ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಪಾಕಿಸ್ಥಾನದ ಅರ್ಷದ್ ನದೀಮ್ 87.82 ಮೀ. ದೂರಕ್ಕೆ ಎಸೆದು ದ್ವಿತೀಯ ಸ್ಥಾನಿಯಾದರು.

ಮೊದಲ ಪ್ರಯತ್ನದಲ್ಲಿ ಪೌಲ್ ಮಾಡಿಕೊಂಡ ನೀರಜ್ ಜೋಪ್ರಾ, ಎರಡನೇ ಪ್ರಯತ್ನದಲ್ಲಿ 88.17 ಮೀ.ವರೆಗೆ ಎಸೆಯುವ ಮೂಲಕ ದಾಖಲೆ ನಿರ್ಮಿಸಿದರು. ನೀರಜ್ ಚೋಪ್ರಾ ಅವರು ಶೂಟರ್ ಅಭಿನವ್ ಬಿಂದ್ರಾ ಅವರನ್ನು ಹೊರತುಪಡಿಸಿದರೆ, ಒಲಿಂಪಿಕ್ ಮತ್ತು ವಿಶ್ವಕಪ್ ಚಾಂಪಿಯನ್‍ಶಿಪ್ ಎರಡರಲ್ಲೂ ಚಿನ್ನ ಗೆದ್ದ ಭಾರತದ ಏಕೈಕ ಅಥ್ಲೀಟ್ ಎನಿಸಿಕೊಂಡರು. ಬಿಂದ್ರಾ ಕ್ರಮವಾಗಿ 23 ಮತ್ತು 25ನೇ ವಯಸ್ಸಿನಲ್ಲಿ ವಿಶ್ವಕಪ್ ಹಾಗೂ ಒಲಿಂಪಿಕ್ ಚಿನ್ನ ಗೆದ್ದಿದ್ದರು.
