ಕಡಬ ತಾಲೂಕು ರೆಡ್ ಕ್ರಾಸ್ ಘಟಕಕ್ಕೆ ಉಪಾಧ್ಯಕ್ಷ ಭಾಸ್ಕರ ರಾವ್ ಭೇಟಿ – ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಡಬ: ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಬೆಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ಭಾಸ್ಕರ ರಾವ್ ಅವರು ಇಂದು ಭಾನುವಾರ ದಿನಾಂಕ 11/೦1/2026 ರಂದು ಕಡಬ ತಾಲೂಕು ರೆಡ್ ಕ್ರಾಸ್ ಘಟಕಕ್ಕೆ ಭೇಟಿ ನೀಡಿ ಘಟಕದ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ರೆಡ್ ಕ್ರಾಸ್ ಸಂಸ್ಥೆಯು ಮಾನವೀಯ ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಮಟ್ಟದಲ್ಲಿಯೂ ಅದರ ಚಟುವಟಿಕೆಗಳು ಇನ್ನಷ್ಟು ಬಲಿಷ್ಠವಾಗಬೇಕೆಂದು ಹೇಳಿದರು. ಸದಸ್ಯತ್ವ ವೃದ್ಧಿಯ ಮೂಲಕ ಸಂಸ್ಥೆಯ ಸೇವೆಗಳನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸಬಹುದು ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅವರು ಕಡಬ ತಾಲೂಕು ಘಟಕದ ಸದಸ್ಯತ್ವ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭ ರಾಜ್ಯ ಶಾಖೆಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಡಾ. ಮುರಳಿ ಮೋಹನ್ ಚೂಂತಾರು ಮಾತನಾಡಿ, ರೆಡ್ ಕ್ರಾಸ್‌ನ ಸೇವಾ ಪರಂಪರೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಡಬ ತಾಲೂಕು ಘಟಕದ ಸಭಾಪತಿಗಳಾದ ಶ್ರೀ ಸದಾಶಿವ ಅವರು ಘಟಕದ ಪ್ರಗತಿ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯದರ್ಶಿಗಳಾದ ಶ್ರೀ ಕಾಶಿನಾಥ್ ಅವರು ಸದಸ್ಯತ್ವ ಅಭಿಯಾನದ ರೂಪುರೇಷೆಗಳನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು.
ಸಭೆಯಲ್ಲಿ ರೆಡ್ ಕ್ರಾಸ್ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Related Posts

Leave a Reply

Your email address will not be published.