ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಿಷ್ಕ್ರಿಯವಾಗಿದೆ: ಯು.ಟಿ. ಖಾದರ್ ಆರೋಪ
ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ಎಂದು ಜನ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಅಷ್ಟು ನಿಷ್ಕ್ರೀಯವಾಗಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸಿದ ಯಡಿಯೂರಪ್ಪ ನೇತೃತ್ವದ ಸರಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ. ಅವರ ಪಕ್ಷದವರೆ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ರೀತಿಯ ಘಟನೆ ಹಿಂದೆಂದು ನಡೆದಿರಲಿಲ್ಲ. ಯಡಿಯೂರಪ್ಪರ ಹೆಸರು ಕೆಡಿಸಲು ಅವರ ಪಕ್ಷದ ಮುಖಂಡರೆ ಮುಂಚೂಣಿಯಲ್ಲಿದ್ದರು. ಲಸಿಕೆ ವಿತರಣೆಯಲ್ಲಿ, ಕೋವಿಡ್ ನಿರ್ವಹಣೆ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯದ ದುಷ್ಪರಿಣಾಮ ವನ್ನು ಜನತೆ ಅನುಭವಿಸುವಂತಾಗಿದೆ.
ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಹಮ್ಮಿಕೊಂಡ ಪಲ್ಸ್ ಪೋಲಿಯೋ ಮಾದರಿಯಲ್ಲಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಲಸಿಕೆ ವಿತರಣೆಯಾಗಬೇಕಿತ್ತು ಅದು ಆಗಿಲ್ಲ. ಸರಕಾರದ ಬಗ್ಗೆ ಬಿಜೆಪಿ ಹೈ ಕಮಾಂಡ್ ನಿರ್ಲಕ್ಷ್ಯ ಧೋರಣೆ ಹೊಂದಿದೆ. ತಮಿಳು ನಾಡಿಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ. ರಾಜ್ಯದಲ್ಲಿ ನೆರೆಪರಿಹಾರ, ಜಿಎಸ್ಟಿ ಪಾಲು ಸಿಗಲಿಲ್ಲ ಇದಕ್ಕೆ ಇಲ್ಲಿಂದ ಆಯ್ಕೆಯಾದ ಸಂಸದರು ಕಾರಣರಾಗಿದ್ದಾರೆ. ಕೋವಿಡ್ ನಿಯಂತ್ರಣದಲ್ಲಾದ ವೈಫಲ್ಯದಿಂದ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುವಂತಾಯಿತು. ಹಲವು ದೇಶಗಳಿಗೆ ಭಾರತೀಯರ ಪ್ರವೇಶಕ್ಕೆ ನಿರ್ಬಂಧವಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ದಿನೇಶ್ ಕುಂಪಲ, ದೇವಾನಂದ ಶೆಟ್ಟಿ, ಜಕ್ರಿಯ ಮಲ್ಹಾರ್, ಮುರಳೀಧರ ಶೆಟ್ಟಿ, ಶೋಭ ಕೊಣಾಜೆ,ಸಿದ್ಧಿಕ್ ಪಾರೆ ಮೊದಲಾದ ವರು ಉಪಸ್ಥಿತರಿದ್ದರು.


















