ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 5ನೇ ದಿನ ಅತಿರುದ್ರ ಮಹಾಯಾಗದ ಧಾರ್ಮಿಕ ಕಾರ್ಯಗಳು
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಐದನೇ ದಿನ ಫೆಬ್ರವರಿ 26, 2023 ರ ಭಾನುವಾರ ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಆಚಾರ್ಯಾದಿ ಋತ್ವಿಗ್ವರಣ, 10 ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀಸೂಕ್ತ ಹೋಮ ನೆರವೇರಿತು. ಮಧ್ಯಾಹ್ನ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾಭಿಮಾನಿಗಳು ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು.

ಸಾಯಂಕಾಲ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನೆರವೇರಲಿದ್ದು, ಸಂಜೆ 5 ರಿಂದ ಸಭಾ ಕಾರ್ಯಕ್ರಮ ಪ್ರಾರಂಭವಾಗುವುದು. ನಂತರ ಉಡುಪಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರಿಂದ ಧಾರ್ಮಿಕ ಉಪನ್ಯಾಸ, ಸಂಜೆ 7 ರಿಂದ ಬೆಂಗಳೂರಿನ ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್ ಇವರಿಂದ ಭಾರತೀಯ ಶಾಸ್ತ್ರೀಯ ನೃತ್ಯ “ಮಹಾರುದ್ರ” ಮತ್ತು ರಾತ್ರಿ 08:30 ರಿಂದ ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್ ಅವರ ನೃತ್ಯ ನಿರ್ದೇಶನದಲ್ಲಿ, ಡಾ. ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ, ಶ್ರೀಮತಿ ಸುಧಾ ಆಡುಕಳ ಅವರ ರಚನೆಯಲ್ಲಿ, ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯ ರೂಪಕ – ನಾರಸಿಂಹ ಜರುಗಲಿದೆ.

















