ಉಡುಪಿ: ಧರ್ಮ, ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ: ಧರ್ಮವನ್ನು ಉಳಿಸಿಕೊಂಡು ಮುಂದೆ ಸಾಗೋಣ: ಡಿಸಿಎಂ ಡಿಕೆಶಿ
ಧರ್ಮ, ಪೂಜೆ, ಭಕ್ತಿ ಪ್ರದರ್ಶನದ ವಸ್ತುವಲ್ಲ. ಆಚಾರ, ವಿಚಾರವನ್ನು ಎಲ್ಲರೂ ಒಟ್ಟಾಗಿ ಕೊಂಡೊಯ್ಯಬೇಕು.ಮರಕ್ಕೆ ಬೇರು ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯನಿಗೆ ನಂಬಿಕೆ ಮುಖ್ಯ. ಹೀಗಾಗಿ ಧರ್ಮವನ್ನು ಉಳಿಸಿಕೊಂಡು ನಾವೆಲ್ಲರೂ ಮುಂದೆ ಸಾಗೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ವತಿಯಿಂದ ಪರ್ಯಾಯ ಪುತ್ತಿಗೆ ಮಠಾ ಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮ ನಕ್ಷತ್ರೋತ್ಸವ ಸಂಭ್ರಮ ನಿಮಿತ್ತ ಶನಿವಾರ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮನ್ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಧರ್ಮವು ಆತ್ಮವಿಶ್ವಾಸದ ದಾರಿದೀಪ ಎಂದರು.
ಶ್ರೀ ಕೃಷ್ಣನು ಉತ್ತಮ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ಪ್ರೇಮಿ, ರಾಜಕಾರಣಿಯೂ ಹೌದು. ಧರ್ಮರಾಯನ ಧರ್ಮ, ಕರ್ಣನ ದಾನ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ ಹಾಗೂ ಕೃಷ್ಣನ ತಂತ್ರಗಾರಿಕೆ ನಮ್ಮಲ್ಲಿ ಇರಬೇಕು ಎಂದರು ಡಿ ಕೆ ಶಿವಕುಮಾರ್. ದಾರಿ ಇದ್ದಲ್ಲಿ ನಡೆಯ ಬೇಕು. ದಾರಿ ಇಲ್ಲದಲ್ಲಿ ದಾರಿ ಮಾಡಿಕೊಂಡು ಸಾಗಬೇಕು. ದೇವರು ವರವನ್ನು ನೀಡುವುದಿಲ್ಲ, ಶಾಪವನ್ನು ಕೊಡುವುದಿಲ್ಲ. ಅವಕಾಶವನ್ನು ಮಾತ್ರ ನೀಡುತ್ತಾನೆ ಎಂದರು.
ಆಚಾರ್ಯ ಮಧ್ವರದ್ದು ನಡುಪಂಥೀಯ ಸಿದ್ಧಾಂತ ಪರ್ಯಾಯ ಶ್ರೀ ಪುತ್ತಿಗೆ ಮಠಾ ಧೀàಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಪ್ರಸ್ತುತ ಜಗತ್ತಿನಲ್ಲಿ ಎಡಬಲ ಚಿಂತನೆ ಅತಿರೇಕಕ್ಕೆ ಏರಿದೆ. ಇಂತಹ ಸಂದರ್ಭದಲ್ಲಿ ಮಧ್ವಾಚಾರ್ಯರು ಸಾರಿದ ನಡುಪಂಥೀಯ ಚಿಂತನೆ ಸಮಾಜವನ್ನು ಅಥವಾ ಜಗತ್ತನ್ನು ಸುಸ್ಥಿತಿಗೆ ತರಬಹುದು. ಆಚಾರ್ಯ ಮಧ್ವರು ಬಹಳ ವರ್ಷಗಳ ಹಿಂದೆ ಹೇಳಿದ ಸಿದ್ಧಾಂತವನ್ನು ವಿಜ್ಞಾನಿಗಳು ಇಂದು ಒಪ್ಪುತ್ತಿದ್ದಾರೆ. ದ್ವೆ„ತ ಸಿದ್ಧಾಂತ ವಿಶಿಷ್ಟವಾದ ಮತ್ತು ಜಗತ್ತಿಗೆ ಉಪಯುಕ್ತವಾದುದು. ಜಗತ್ತಿಗೆ ಮಾನ್ಯವಾದ ಸಂಸ್ಕರಿಸಿದ, ಸಮರ್ಥ ವೇದಾಂತ ಮಧ್ವಾಚಾರ್ಯರ ಸಿದ್ಧಾಂತ ಎಂದರು.


















